ಭಾರತೀಯ ದಂಡಸಂಹಿತೆ

ಭಾರತದಲ್ಲಿ ಸಂವಿಧಾನಬದ್ದವಾಗಿ ಜಾರಿಯಲ್ಲಿರುವ ಅಪರಾಧ ಶಿಕ್ಷಾನೀತಿ (ಇಂಡಿಯನ್ ಪೀನಲ್ ಕೋಡ್). ಇದನ್ನು ನಾಗರಿಕ ಸಮಾಜದ ನ್ಯಾಯದೃಷ್ಟಿಯ ಕೊಡುಗೆ ಎನ್ನಬಹುದು. ರಾಜ್ಯದ ವಿರುದ್ದ ಮತ್ತು ವ್ಯಕ್ತಿಗಳ ದೈಹಿಕ ಹಾಗೂ ಸೊತ್ತಿನ ಹಕ್ಕುಗಳ ವಿರುದ್ದ ಮಾಡುವ ದಂಡನಾರ್ಹ ಅಪರಾಧನೆಗಳಿಗೆ ಅಪರಾದಿಗಳನ್ನು ಶಿಕ್ಷಿಸುವುದರಲ್ಲಿ ಸಾಮಾಜಿಕ ಹಿತಾಸಕ್ತಿಯನ್ನು ಕಾನೂನು ನಿರ್ಮಾತೃಗಳು ಕಂಡುಕೊಂಡಿದ್ದಾರೆ. ದುಷ್ಟಪ್ರವೃತ್ತಿಗಳನ್ನು ಶಿಕ್ಷಿಸುವ ಮೂಲಕ ಅಪರಾಧಿಗಳ ಮೇಲೆ ದೂಷಣೆಯನ್ನೂ ವ್ಯಕ್ತಪಡಿಸುವುದಲ್ಲದೆ ಅಪರಾಧ ಪ್ರವೃತ್ತಿ ಇರುವ ವ್ಯಕ್ತಿಗಳಿಗೆ ಸರಿಯಾದ ಪಾಠ ಕಲಿಸುವುದರಿಂದ ಕೂಡ ಸಮಾಜ ತನ್ನ ಸುಭದ್ರತೆಯನ್ನು ಕಾಪಾಡಿಕೊಳ್ಳುತ್ತದೆ. ಇದರಿಂದ ಸಮಾಜದ ಸದಸ್ಯರಿಗೆ ಭಯರಹಿತ ವಾತಾವರಣ ಉಂಟಾಗಿ ಅವರ ಹಿತಾಸಕ್ತಿ ಮತ್ತು ಅಭಿವೃದ್ದಿ ಸಾಧಿತವಾಗುತ್ತವೆ. ಇದು ಮಾನವೇತಿಹಾಸದ ಅಭಿವರ್ಧನೆಯಲ್ಲಿ ಕಂಡುಕೊಂಡ ಸತ್ಯ.

ಅಪರಾಧಿಯ ವಿರುದ್ಧ ವೈಯಕ್ತಿಕ ದ್ವೇಷ ಸಾಧಿಸುವ ಪ್ರಾಚೀನ ಕಾಲದ ಹಲ್ಲಿಗೆ ಹಲ್ಲು, ಕಣ್ಣಿಗೆ ಕಣ್ಣು ಜೀವಕ್ಕೆ ಜೀವ ಎಂಬ ತತ್ತ್ವದಲ್ಲಿ ಒರಟಾದ ಅಪರಾಧ ದಂಡನೀತಿಯನ್ನು ಕಾಣಬಹುದು. ಕಾಲಕ್ರಮೇಣ ಅಪರಾಧಕ್ಕೆ ಬಲಿಯಾದವ ಅಪರಾಧಿಯಿಂದ ಆರ್ಥಿಕ ಪರಿಹಾರ ಪಡೆಯುವ ಪದ್ಧತಿ ರೂಢಿಗೆ ಬಂತು. ಮುಂದೆ, ಅಪರಾಧ ಕೃತ್ಯದಿಂದ ಸಾಮಾಜಿಕ ಹಿತಾಸಕ್ತಿಗೆ ಧಕ್ಕೆಯಾಗುವುದರಿಂದ ಅಪರಾಧ ನಿರ್ಮೂಲನ ಕಾರ್ಯ ರಾಜ್ಯದ ಜವಾಬ್ದಾರಿ ಎಂಬ ಅರಿವುಂಟಾಗಿ ಅಪರಾಧಿಯನ್ನು ದಂಡಿಸುವ ಹೊಣೆ ಸರ್ಕಾರದ್ದು ಎನ್ನುವ ಪದ್ಧತಿ ಜಾರಿಗೆ ಬಂತು. ಪಾಶ್ಚಾತ್ಯ ನಾಗರಿಕತೆಯಲ್ಲಿ ಈ ತರಹದ ಅಭಿವರ್ಧನೆ ಕಂಡುಬಂದಿದೆ. ಪ್ರಾಚೀನ ಭಾರತದಲ್ಲಿ ಹಲ್ಲೆ, ಕಳವು, ದರೋಡೆ, ಸುಳ್ಳು ಸಾಕ್ಷ್ಯ, ಅಪಮಾನ, ಅತ್ಯಾಚಾರ, ಪರಸ್ತ್ರೀಸಂಗ ಮೊದಲಾದ ಕೃತ್ಯಗಳನ್ನು ದಂಡನಾರ್ಹ ಅಪರಾಧಗಳೆಂದು ಗುರುತಿಸಲ್ಲಟ್ಟದ್ದನ್ನು ಮನುಸ್ಮøತಿ ಮತ್ತು ಇತರ ಗ್ರಂಥಗಳಲ್ಲಿ ಕಾಣುತ್ತೇವೆ. ಶಿಷ್ಟರಕ್ಷಣೆ ಮತ್ತು ದುಷ್ಟಶಿಕ್ಷಣೆ ರಾಜರ ಆದ್ಯ ಕರ್ತವ್ಯಗಳಲ್ಲೊಂದಾಗಿತ್ತು. ಮಧ್ಯಯುಗೀನ ಭಾರತದಲ್ಲಿ ಮುಸ್ಲೀಮ್ ಮತ್ತು ಹಿಂದೂ ಧರ್ಮಶಾಸ್ತ್ರಗಳ ಅನ್ವಯ ಅಪರಾಧ ನಿರ್ಣಯ ಮತ್ತು ಶಿಕ್ಷೆ ವಿಧಿಸುವಿಕೆ ನಡೆಯುತ್ತಿದ್ದುವು.

ಆಧುನಿಕ ಕಾಲದಲ್ಲಿ ಪಾಶ್ಚಾತ್ಯ ರಾಷ್ಟ್ರಗಳ, ಮುಖ್ಯವಾಗಿ ಇಂಗ್ಲೆಂಡಿನ, ವಸಾಹತುವಾದಕ್ಕೆ ಗುರಿಯಾದ ಭಾರತದಲ್ಲಿ ನಿಧಾನವಾಗಿ ಪಾಶ್ಚತ್ಯ ರೀತಿಯ ಅಪರಾಧ ದಂಡನಾ ಕಾನೂನಿನ ಬೆಳೆವಣಿಗೆ ಆಯಿತು. 1600 ಮತ್ತು 1609ರಲ್ಲಿ ಇಂಗ್ಲೆಂಡಿನ ದೊರೆಯಿಂದ ಕೊಡಲಾದ ಸನದಿನ ಪ್ರಕಾರ ಈಸ್ಟ್ ಇಂಡಿಯಾ ಕಂಪನಿ ಶಾಸನಾಧಿಕಾರ ಪಡೆಯಿತು. 1672ರಲ್ಲಿ ಜುಡೀಕೇಚರ್ ನ್ಯಾಯಾಲಯವನ್ನು ಬೊಂಬಾಯಿಯಲ್ಲಿ ಸ್ಥಾಪಿಸಲಾಯಿತು. ಇದು ಚಿಕ್ಕ ಪುಟ್ಟ ಆರ್ಥಿಕ ಅಪರಾಧ ಮಾಡಿದವರಿಗೆ ಶಿಕ್ಷೆ ವಿಧಿಸಿ ಅಪರಾಧಕ್ಕೆ ಬಲಿಯಾದವರಿಗೆ ಪರಿಹಾರ ಕೊಡುವಂತೆ ವಿಧಿಸುತ್ತಿತ್ತು. 1687ರಲ್ಲಿ ಮದ್ರಾಸಿನ ಸೇಂಟ್ ಜಾರ್ಜ್ ಬಂದರದಲ್ಲಿ ಮೇಯರನ ನ್ಯಾಯಾಲಯ ಸ್ಥಾಪಿಸಿ ಅದಕ್ಕೆ ಅಪರಾಧ ದಂಡನೆಯ ಅಧಿಕಾರಕೊಡಲಾಯಿತು. 1726ರಲ್ಲಿ ಇನ್ಷಷ್ಟು ಇಂಥ ನ್ಯಾಯಾಲಯಗಳನ್ನು ಆರಂಭಿಸಲಾಯಿತು. ಆದರೆ ಇವು ಅನನುಭವಿ ನ್ಯಾಯ ವಿತರಕರಿಂದಾಗಿ ನಿರಂಕುಶ ಆಡಳಿತ ನಡೆಸಿದುವು. 1753ರ ಸನದಿನಂತೆ ಭಾರತೀಯರೊಳಗಿನ ವಿವಾದ ಅಥವಾ ಅಪರಾಧಗಳನ್ನು ಮೇಯರನ ನ್ಯಾಯಾಲಯಗಳೂ ನಿರ್ಣಯಿಸದಂತೆ ಮಾಡಲಾಯಿತು. ಭಾರತದಲ್ಲಿ ಇಂಗ್ಲೆಂಡಿನ ವಸಾಹತು ವಿಸ್ತರಿಸುತ್ತ ಹೋದಂತೆ ಅಪರಾಧ ದಂಡನಾ ನ್ಯಾಯದ ಕ್ರಮಬದ್ಧ ಆಡಳಿತದ ಅಗತ್ಯವೂ ಹೆಚ್ಚಿತು. ಈ ಪ್ರಯುಕ್ತ 1772ರಲ್ಲಿ ವಾರನ್ ಹೇಸ್ಟಿಂಗ್ಸ್ ಪ್ರತಿಯೊಂದು ಜಿಲ್ಲೆಗೂ ಒಂದು ಫೌಜ್‍ದಾರಿ ಅದಾಲತನ್ನು ಸ್ಥಾಪಿಸಿ ಅದಕ್ಕೆ ಅಪರಾಧದಂಡನೆಯ ಅಧಿಕಾರ ಕೊಟ್ಟ. ಈ ನ್ಯಾಯಲಯದ ಅಧಿಕಾರಿಗಳು ಇಂಗ್ಲೆಂಡಿನ ಪ್ರಜೆಗಳಾಗಿರದೆ ಭಾರತೀಯ ಕಾಜಿ ಅಥವಾ ಮುಫ್ತಿಗಳಾಗಿದ್ದರು. ಜಿಲ್ಲಾ ಕಲೆಕ್ಟರುಗಳಿಗೆ ಇವುಗಳ ಮೇಲೆ ಮೇಲ್ವಿಚಾರಣಾ ಅಧಿಕಾರವನ್ನು ಕೊಡಲಾಯಿತು. ಈ ನ್ಯಾಯಾಲಯಗಳ ನಿರ್ಣಯದ ಮೇಲೆ ಮೇಲ್ಮನವಿ ಅಧಿಕಾರ ಹೊಂದಿದ ಸದ್ದರ್ ನಿಜಾಮತ್ ಅದಾಲತನ್ನೂ ಸ್ಥಾಪಿಸಲಾಯಿತು. ಹಿಂದೂಗಳಿಗೆ ಹಿಂದೂ ಕಾನೂನುರೀತ್ಯ ಮತ್ತು ಮುಸ್ಲಿಮರಿಗೆ ಮಹಮ್ಮದೀಯ ಕಾನೂನುರೀತ್ಯ ನ್ಯಾಯ ವಿತರಣೆ ಮಾಡಲಾಗುತ್ತಿತ್ತು. ಬೊಂಬಾಯಿ ಪ್ರಾಂತ್ಯದಲ್ಲಿ ಹಿಂದೂ ನ್ಯಾಯಗ್ರಂಥವಾದ ವ್ಯಾವಹಾರ ಮಯೂಖ ಪ್ರಧಾನ ನ್ಯಾಯಗ್ರಂಥವಾಗಿತ್ತು.

1773ರ ವಿನಿಯಾಮಕ ಅಧಿನಿಯಮದ (ರೆಗ್ಯುಲ್ಭೆಟಿಂಗ್ ಆಕ್ಟ್) ಮೂಲಕ ಕಲ್ಕತ್ತಾದಲ್ಲಿ ಅಪರಾಧ ದಂಡನಾ ಅಧಿಕಾರವುಳ್ಳ ಸರ್ವೋಚ್ಚ ನ್ಯಾಯಾಲಯವನ್ನು (ಸುಪ್ರೀಮ್ ಕೋರ್ಟ್ ಆಫ್ ಜುಡಿಕೇಚರ್) ಸ್ಥಾಪಿಸಲಾಯಿತು. ಬಂಗಾಳದಲ್ಲಿ ಮಹಮ್ಮದೀಯ ಅಪರಾಧ ದಂಡನಾ ಕಾನೂನೇ ಎಲ್ಲರಿಗೂ ಅನ್ವಯವಾಗುತ್ತಿತ್ತು. 1793ರಲ್ಲಿ ಲಾರ್ಡ್ ಕಾರ್ನ್‍ವಾಲೀಸನ ಮುತುವರ್ಜಿಯಲ್ಲಿ ನ್ಯಾಯಲಯಗಳ ಶ್ರೇಣಿಕರಣದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಯಿತು ಮತ್ತು ಜ್ಯೂರಿ ಪದ್ಧತಿಯ ಅಪರಾಧ ನಿರ್ಣಯ ಕ್ರಮವನ್ನು ವ್ಯಾಪಕವಾಗಿ ಅನುಸರಿಸಲಾಯಿತು.

	ಅಪರಾಧ ದಂಡನಾ ನಿರ್ಣಯದ ಪದ್ಧತಿ ಮತ್ತು ಪ್ರಕ್ರಿಯೆಗಳ ಕುರಿತು ಹಲವಾರು ಸುಧಾರಣೆಗಳಾದರೂ 1833ರ ತನಕ ಅಪರಾಧ ದಂಡನಾ ಕಾನೂನಿನ ಕ್ರೋಡೀಕರಣಕ್ಕೆ ಸಫಲ ಪ್ರಯತ್ನ ನಡೆಯಲಿಲ್ಲ. ಭಾರತದಲ್ಲೂ ಅಪರಾಧಿ ದಂಡನಾ ಕಾನೂನನ್ನು ಸರ್ವತ್ರ ಏಕರೀತಿಯ ಕಾನೂನಾಗಿ ಕ್ರೋಢಿಕರಿಸಲು ಭಾರತದಲ್ಲಿ ಒಂದು ಶಾಸನ ಸಭೆ ನಿರ್ಮಿಸುವ ಉದ್ದೇಶದ ಮಸೂದೆಯನ್ನು ಇಂಗ್ಲೀಷ್ ಪಾರ್ಲಿಮೆಂಟಿನ ಸದಸ್ಯನಾದ ಮೆಕಾಲೆ (ಮುಂದೆ ಲಾರ್ಡ್) ಹೌಸ್ ಆಫ್ ಕಾಮನ್ಸಿನಲ್ಲಿ ಮಂಡಿಸಿದ (1833). 1833ರ ಸನದಿನ ಪ್ರಕಾರ ಹಿಂದೂ ಮುಸ್ಲಿಮರಿಗೂ ಅಂತೆಯೇ ಗ್ರಾಮಾಂತರಗಳಿಗೂ ಅನ್ವಯವಾಗುವಂತೆ ಕಾನೂನು ಮಾಡುವ ಅಧಿಕಾರದ ಸಭೆಯನ್ನು ಸ್ಥಾಪಿಸಲಾಯಿತು.

	ಈ ಶಾಸನಸಭೆಯ ನಿರ್ಣಯದಂತೆ ತಯಾರಿಕೆಗಾಗಿ ಪ್ರಥಮ ಭಾರತೀಯ ಕಾನೂನು ಆಯೋಗವನ್ನು ರಚಿಸಲಾಯಿತು. ಲಾರ್ಡ್ ಮೆಕಾಲೆ ಅಧ್ಯಕ್ಷನಾಗಿ ಮತ್ತು ಮೆಕಾಲಿಯಾಡ್, ಆ್ಯಂಡರ್‍ಸನ್ ಹಾಗೂ ಮಿಲ್ಲೆಟ್ ಸದಸ್ಯರಾಗಿ ಇದ್ದ ಈ ಆಯೋಗ ಭಾರತೀಯ ನ್ಯಾಯಪದ್ಧತಿಗೆ ವಿಶಿಷ್ಟವಾದ ಕೊಡುಗೆಯನ್ನಿಸಿತು. ಇಂಗ್ಲೆಂಡಿನಲ್ಲಿ ಪ್ರಚಲಿತವಿದ್ದ ಕಾಮನ್ ಲಾ, ಭಾರತೀಯ ಕಾನೂನು ಮತ್ತು ನಿಯಮಗಳು, ಲಿವಿಂಗ್‍ಸ್ಟೋನರ ಲೂಯಿಸಿಯಾನ ಸಂಹಿತೆ ಮತ್ತು ನೆಪೋಲಿಯನ್ ಕಾನೂನು ಸಂಹಿತೆಗಳ ವಿಸ್ತøತ ಅಧ್ಯಯನಮಾಡಿ ಉಪಯೋಗತಾವಾದದ (ಯಟಿಲಿಟೇರಿಯನಿಸಮ್) ತತ್ತ್ವಗಳಿಂದ ಪ್ರೇರಿತರಾಗಿ ಈ ಆಯೋಗ ಭಾರತೀಯ ದಂಡಸಂಹಿತೆಯ ಕರಡು ಪ್ರತಿ ಬರೆಡು 1837ರಲ್ಲಿ ಭಾರತದ ಗವರ್ನರ್ ಜನರಲ್ಲನಿಗೆ ಒಪ್ಪಿಸಿತು. ಇದು ಇಂಗ್ಲೆಂಡಿನ ರಾಜನ ಕಾನೂನು ಸಲಹೆಗಾರರಿಂದ ಮತ್ತು ಪ್ರತಿಷ್ಠಿತ ನ್ಯಾಯಾಧೀಶರುಗಳಿಂದ ವ್ಯಾಪಕವಾಗಿ ಪರೀಕ್ಷಿಸಲ್ಪಟ್ಟಿತು. 1845ರಲ್ಲಿ ಕರಡು ದಂಡಸಂಹಿತೆಯನ್ನು ಪರಿಷ್ಕಾರಗೊಳಿಸಲು ಇನ್ನೊಂದು ಕಾನೂನು ಅಯೋಗವನ್ನು ನೇಮಿಸಲಾಯಿತು. ಈ ಆಯೋಗ ಪರಿಷ್ಕøತ ದಂಡಸಂಹಿತೆಯ ವರದಿಯನ್ನು ಎರಡು ಭಾಗಗಳಾಗಿ 1846 ಮತ್ತು 1847ರಲ್ಲಿ ಕೊಟ್ಟಿತು. ಭಾರತದ ಗವರ್ನರ್ ಜನರಲ್ಲನ ಕೌನ್ಸಿಲಿನ ನ್ಯಾಯವೇತ್ತ ಸದಸ್ಯರಾದ ಬೆಥುನ್ ಮತ್ತು ಪೀಕಾಕ್ ಇವರಿಂದ ಮತ್ತೆ ಪರಿಷ್ಕರಿಸಲ್ಪಟ್ಟ ಭಾರತೀಯ ದಂಡಸಂಹಿತೆ ಶಾಸನಸಭೆಯಲ್ಲಿ 1856ರಲ್ಲಿ ಮಂಡಿಸಲಾಗಿ 1860ರಲ್ಲಿ ಅಂಗೀಕೃತವಾಯಿತು. 1860 ಅಕ್ಟೋಬರ್ 6 ರಂದು ಗವರ್ನರ್ ಜನರಲ್ಲನ ಸಮ್ಮತಿ ಪಡೆದ ಭಾರತೀಯ ದಂಡಸಂಹಿತೆ 1862 ಜನವರಿ 10ರಂದು ವ್ಯಾಪಕವಾಗಿ ಜಾರಿಗೆ ಬಂದಿತು. ಲಾರ್ಡ್‍ಮಕಾಲೆಯ ಕಾಳಜಿ, ಶ್ರಮ, ನ್ಯಾಯಪರ ನಿಲುವು ಮತ್ತು ಭಾರತೀಯ ಸಮಾಜದ ಪರಿಸ್ಥಿತಿಯ ಅರಿವು ಭಾರತೀಯ ದಂಡಸಂಹಿತೆಯ ತಯಾರಿಕೆಯ ಕಥೆಯ ಹಿನ್ನಲೆಯಲ್ಲಿ ಕಂಡುಬರುವ ಮರೆಯಲಾಗದ ಅಂಶಗಳು.

	ಬದ್ಧ ಸಮಾಜದ ಹಿತಾಸಕ್ತಿಗೆ ಮಾರಕವಾದ ಹಕ್ಕುಚ್ಯುತಿಗಳನ್ನು ಆಯ್ದು ಅವನ್ನು ಅಪರಾಧಗಳೆಂದು ಗುರುತಿಸಿ ಯೋಗ್ಯ ಶಿಕ್ಷೆಯನ್ನು ಅಂದರೆ ಅಪರಾಧ ಪ್ರವ್ಲತ್ತಿಯನ್ನು ಹತ್ತಿಕ್ಕಲು ಸಾಧ್ಯವಾಗುವಂಥ ಶಿಕ್ಷೆ ವಿಧಿಸುವುದೇ ದಂಡಸಂಹಿತೆಯ ನ್ಯಾಯಬದ್ದ ಉದ್ದೇಶ. ರಾಜ್ಯದಲ್ಲಿರುವ ಕಾನೂನಿಗೆ ವಿರೋಧವಾಗಿ ಸಮಾಜದ ಹಿತ್ತಾಸಕ್ಕಿಗೆ ಭಂಗತರುವ ಕೃತ್ಯ ಮತ್ತು ಕರ್ತವ್ಯ ಲೋಪಗಳೇ ಅಪರಾಧಗಳು. ಭಾರತೀಯ ದಂಡರಹಿತ ಪ್ರತಿಯೊಂದು ಅಪರಾದಕ್ಕೂ ವ್ಯಾಖ್ಯೆ ನೀಡಿ ಅಪರಾಧಿಗೆ ಯಾವ ಶಿಕ್ಷೆಯನ್ನು ವಿಧಿಸಬೇಕೆಂದು ಹೇಳಿದೆ. ಶಿಕ್ಷೆಯ ಗರಿಷ್ಠ ಮಿತಿಯನ್ನು ಹೇಳಿದ್ದು ಪ್ರಕರಣಕ್ಕೆ ತಕ್ಕಂತೆ ಅದರ ಮೊತ್ತವನ್ನು ನಿಗದಿಮಾಡುವುದು ನ್ಯಾಯಾಧೀಶರ ವಿವೇಚನೆಗೆ ಬಿಟ್ಟ ವಿಷಯವಾಗಿದೆ. ಜನರ ವರ್ತನೆಯನ್ನು ನಿಯಂತ್ರಿಸುವುದರ ಮೂಲಕ ದಂಡಸಂಹಿತೆ ಸಮಾಜದಲ್ಲಿ ಸುಭದ್ರತೆ, ಶಾಂತಿ ಮತ್ತು ಕನಿಷ್ಠ ನೈತಿಕತೆಯನನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ. ಆದರೆ ದಂಡ ಸಂಹಿತೆ ಒಂದು ನೀತಿ ಸಂಹಿತೆ ಎಂದರೆ ತಪ್ಪಾದೀತು. ಅವೆಷ್ಟೊ ನೈತಿಕ ತತ್ತ್ವಗಳು ದಂಡಸಂಹಿತೆಯ ಹೊರಗೆ ಉಳಿದಿವೆ. ಹಾಗೆಯೇ ದಂಡ ಸಂಹಿತೆಯ ಹಲವು ಅಪರಾಧಗಳು ನೈತಿಕತೆಗೆ ಸಂಬಂಧಪಟ್ಟವಲ್ಲ. ಉದಾಹರಣೆತೆ ಕೃತಘ್ನತೆ. ನಿರ್ದಯತೆ ಅಪರಾಧಗಳಲ್ಲ. ಇನ್ನೊಬ್ಬನ ಕಿಟಕಿ ಗಾಜು ಒಡೆಯುವುದು ಅಪರಾಧ. ಕಾನೂನು ಕನಿಷ್ಠ ಮಟ್ಟದ ನೈತಿಕತೆಯನ್ನು ಸಾಧಿಸಲು ಯತ್ನಿಸುವುದಷ್ಟೆ ಹೊರತು ಗರಿಷ್ಠ ಮಟ್ಟದ್ದನ್ನಲ್ಲ.

ಅಪರಾಧೀ ಮನೋಭಾವ ಅಥವಾ ಉದ್ದೇಶ ಮತ್ತು ಅಕೃತ್ಯ ಒಟ್ಟಿಗೆ ಸೇರಿದಾಗ ಅಪರಾದವಾಗುತ್ತದೆ ಎಂಬುದು ಅಪರಾಧ ದಂಡನಾ ಕಾನೂನಿನ ಒಂದು ಸಾಮಾನ್ಯ ತತ್ತ್ವ. ಅಕೃತ್ಯವೆಸಗಿದವನ ಮನಸ್ಸು ಮುಗ್ಧವಾಗಿದ್ದಲ್ಲಿ ಆ ಕೃತ್ಯ ಅಪರಾಧವೆನಿಸುವುದಿಲ್ಲ. ಆದರೆ ಶಾಸನದ ಮೂಲಕ ಯಾವುದೇ ಒಂದು ಅಪರಾಧಕ್ಕೆ ವ್ಯಾಖ್ಯೆ ಕೊಡುವಾಗ ಶಾಸನಸಭೆ ಅಪರಾಧಿಯ ಮಾನಸಿಕ ನಿಲವಿಗೆ ಯಾವುದೊಂದೂ ಪ್ರಮುಖ್ಯ ಕೊಡದೆ ಬರಿಯ ಕೃತ್ಯ ಆಥವಾ ಅಪರಾಧಕ್ಕೆ ಬೇಕಾದ ವಿಶಿಷ್ಟ ಮಾನಸಿಕ ನಿಲವನ್ನು ನಿಚ್ಚಳವಾಗಿ ಗುರುತಿಸಬಹುದು. ಆದ್ದರಿಂದ ಭಾರತೀಯ ದಂಡ ಸಂಹಿತೆಯಲ್ಲಿ ನಮೂದಿತವಾದ ಅಪರಾದಗಳ ಮಟ್ಟಗೆ ಮೇಲೆ ಹೇಳಿದ ಸಾಮಾನ್ಯತತ್ತ್ವ ಅನ್ವಯವಾಗುವುದಿಲ್ಲ. ಆದರೂ ಭಾರತೀಯ ದಂಡ ಸಂಹಿತೆ ಅಪರಾಧಗಳನ್ನೂ ವ್ಯಾಖ್ಯಿಸುವಾಗ ಸ್ವ ಇಚ್ಚೆಯಿಂದ, ತಿಳಿವಳಿಕೆಯಿಂದ, ಅಪ್ರಾಮಾಣಿಕವಾಗಿ, ಮೋಸದ ಉದ್ದೇಶದಿಂದ, ಇತ್ಯಾದಿ ಮಾನಸಿಕ ನಿಲವನ್ನು ಸೂಚಿಸುವ ಶಬ್ದಗಳನ್ನು ಉಪಯೋಗಿಸಿದೆ. (ಕೆಲವು ಅಪರಾಧಗಳಿಗೆ ಉದಾಹರಣೆಗೆ ಸಾರ್ವಜನಿಕ ಆರೋಗ್ಯಕ್ಕೆ ಧಕ್ಕೆ ಉಂಟುಮಾಡುವ ಅಪರಾಧಗಳು ಮಾನಸಿಕ ನಿಲವನ್ನು ಅಗತ್ಯದ ಅಂಶವಾಗಿ ಸೂಚಿಸಿಲ್ಲ.) ತಮ್ಮ ಕೃತ್ಯದ ಸ್ವರೂಪ ಮತ್ತು ಪರಿಣಾಮ ಅರಿಯದ ಮಕ್ಕಳು, ಕುಡುಕರು ಮತ್ತು ಮಾನಸಿಕ ಅಸ್ವಸ್ಥರು ಮಾಡಿದ ಅಪರಾಧಗಳಿಗೆ ಶಿಕ್ಷೆ ವಿಧಿಸದಿರುವುದು: ಕರ್ತವ್ಯ ನಿರ್ವಹಣೆಯ ಸಂಧರ್ಭದಲ್ಲಿ ಸತ್ಯಾಂಶದ ಕುರಿತಾಗಿ ತಪ್ಪು ಗ್ರಹಿಕೆಯಿಂದ ಮಾಡಿದ ಅಪರಾಧಕ್ಕೆ ಶಿಕ್ಷೆ ವಿಧಿಸದಿರುವುದು. ನ್ಯಾಯಬದ್ಧ ಕೆಲಸಗಳನ್ನು ಮಾಡುವಾಗ ಆದ ಅನುದ್ದೇಶಿತ ಅಪಘಾತ ಹಾಗೂ ದೌರ್ಭಾಗ್ಯಗಳು, ಹೆಚ್ಚಿನ ಹಾನಿಯನ್ನು ತಪ್ಪಿಸಲೋಸುಗ ಅಪರಾಧೀ ಮನೋಭಾವವಿಲ್ಲದೆ ಸದುದ್ದೇಶದಿಂದ ಮಾಡಿದ ಅಪರಾಧಗಳು, ಸ್ವರಕ್ಷಣೆಗಾಗಿ ಮಾಡಿದ ಅಪರಾಧಗಳು-ಈ ಮೊದಲಾದ ಸಂದರ್ಭಗಳಲ್ಲಿ ಶಿಕ್ಷೆ ವಿಧಿಸದಿರುವುದು ಭಾರತೀಯ ದಂಡ ಸಂಹಿತೆಯಲ್ಲಿ ಸ್ಪಷ್ಟವಾಗಿ ಹೇಳಿರುವ ತತ್ತ್ವಗಳು. ಭಾರತೀಯ ದಂಡ ಸಂಹಿತೆ ಈ ರೀತಿ ಅಪರಾಧ ದಂಡನಾ ಕಾನೂನಿನ ಮೂಲಭೂತ ತತ್ತ್ವವನ್ನು-ಒಂದು ಕೃತ್ಯ ಅಪರಾಧವಾಗಲು ಅಪರಾಧೀ ಮನೋಭಾವದಿಂದ ಮಾಡಿದ ಕಾನೂನು ವಿರೋಧಿ ಕೃತ್ಯವಾಗಿರಬೇಕು-ಅಪ್ರತ್ಯಕ್ಷವಾಗಿ ಮನ್ನಿಸಿದೆ.

	ಭಾರತೀಯ ದಂಡ ಸಂಹಿತೆ ಆದಿಯಲ್ಲಿ 23 ಅಧ್ಯಾಯಗಳಲ್ಲಿ 511 ವಿಧಿಗಳನ್ನೂ ಹೊಂದಿತ್ತು. 1920ರಲ್ಲಿ ಚುನಾವಣಾ ಅಪರಾಧಗಳ ವಿಧಿಗಳಿಂದ ಕೂಡಿದ ಒಂದು ಅಧ್ಯಾಯವನ್ನು ಸೇರಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ರೂಪುರೇಖೆಗಳು ಈ ಕೆಳಗಿನಂತಿವೆ;

	ಸಾಮಾನ್ಯ ನಿಯಮಗಳು 1 ದಂಡ ಸಂಹಿತೆಯ ಪ್ರಾದೇಶಿಕ ವ್ಯಾಪ್ತಿಯ ಮಿತಿ (ಅಧ್ಯಾಯ 1) ;ಭಾರತದ ಭೂ, ವಾಯು, ಜಲಪ್ರದೇಶಗಳಲ್ಲಿ ನಡೆಯುವ ಅಪರಾಧಗಳಿಗೆ ದಂಡ ಸಂಹಿತೆ ಅನ್ವಯವಾಗುತ್ತದೆ. ಭಾರತೀಯ ನಾಗರಿಕ ಮಾಡಿದ ಅಥವಾ ಭಾರತದಲ್ಲಿ ನೋಂದಣಿಯ ಹಡಗು ಮತ್ತೆ ವಿಮಾನಗಳಲ್ಲಿ ನಡೆದ ಎಲ್ಲ ಅಪರಾಧಗಳಿಗೂ ದಂಡಸಂಹಿತೆ ಅನ್ವಯವಾಗುತ್ತದೆ. ರಾಷ್ಟ್ರಪತಿ, ರಾಜ್ಯಪಾಲ ಮತ್ತು ಉಚ್ಛ ಹಾಗೂ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳ ವಿರುದ್ದ ದಂಡ ಸಂಹಿತೆ ಅನ್ವಯವಾಗುವುದಿಲ್ಲ.

ಸಾಮಾನ್ಯ ವಿವರಗಳು (ಅಧ್ಯಾಯ 11): ದಂಡ ಸಂಹಿತೆಯಲ್ಲಿ ಬರುವ ಪ್ರಮುಖ ಪಾರಿಭಾಷಿಕ ಪದಗಳ ವಿವರಗಳನ್ನು ಈ ಅಧ್ಯಾಯದಲ್ಲಿ ಕೊಡಲಾಗಿದೆ.

	3 ಶಿಕ್ಷೆಗಳು (ಅಧ್ಯಾಯ 111): ಮರಣದಂಡನೆ. ಆಮರಣ ತುರಂಗವಾಸ, ಕಠಿಣ ತುರಂಗವಾಸ. ಸಾಧಾರಣ ತುರಂಗವಾಸ, ಏಕಾಂಗೀ ತುರಂಗವಾಸ, ಆಸ್ತಿ ಮೇಲೂ ಮುಟ್ಟುಗೋಲು ಮತ್ತು ದಂಡ ವಿಧಿಸುವಿಕೆ-ಇವು ದಂಡಸಂಹಿತೆಯಲ್ಲಿ ಕಂಡುಬರುವ ಶಿಕ್ಷೆಗಳು. ಇವುಗಳ ಸ್ವರೂಪ, ವ್ಯಾಪ್ತಿ ಮಿತಿಗಳ ಕುರಿತು ನಿಯಮಗಳು ಈ ಅಧ್ಯಾಯದಲ್ಲಿವೆ.

	4 ಸಾಮಾನ್ಯ ಅಪವಾದಗಳು ಅಧ್ಯಾಯ(Iಗಿ) ; ಯಾವ ಯಾವ ಸಂಧರ್ಭದಲ್ಲಿ `ಅಪರಾಧ` ಮಾಡಿದರೂ ಶಿಕ್ಷೆಯಿಂದ ಮುಕ್ತರು ಮತ್ತು ಅವರು ಮಾಡಿದ್ದು ಅಪರಾಧವಲ್ಲ ಎಂಬುದನ್ನು ಈ ಅಧ್ಯಾಯದಲ್ಲಿ ಹೇಳಿದೆ. ಮೇಲೆ ಉಲ್ಲೇಖಿಸಿದಂತೆ ಮಕ್ಕಳು, ಕುಡುಕರು, ಹುಚ್ಚರು ಮಾಡಿದ್ದು ಮತ್ತು ಅಪಘಾತ, ಸಂರಕ್ಷಣೆ, ತಪ್ಪುಗ್ರಹಿಕೆಗಳಿಂದಾದದ್ದು ಅಪರಾಧವಲ್ಲ. ಆದರೆ ಕಾನೂನಿನ ಅಜ್ಞಾನದಿಂದ ಮಾಡಿದ ಕೃತ್ಯಗಳು ಕ್ಷಮ್ಯವಲ್ಲ.

5. ಅಪವಾಧಕ್ಕೆ ದುರ್ಬೋಧನೆ ಮಾಡುವುದು ಅಪರಾಧವೇ (ಅಧ್ಯಾಯ ಗಿ)

6. ಒಳಸಂಚಿನ ಅಪರಾಧ (ಅಧ್ಯಾಯ ಗಿಂ)

7. ಅಪರಾಧ ಪ್ರಯತ್ನ (ಅಧ್ಯಾಯ ಘಿಘಿII )

	ದಂಡ ಸಂಹಿತೆಯಲ್ಲಿ ವಿಶಿಷ್ಟವಾಗಿ ವ್ಯಾಖ್ಯಾನ ಪಡೆದು ಶಿಕ್ಷೆಯನ್ನು ಕೊಡಮಾಡುವ ಅಪರಾಧಗಳು :
1. ರಾಜ್ಯದ ಸುಭದ್ರತೆ ಮತ್ತು ಹಿತಾಸಕ್ತಿಗೆ ಆತಂಕ ತರುವ ಅಪರಾಧಗಳು: ಭಾರತ ಸರ್ಕಾರ ವಿರುದ್ದ ಯುದ್ದ ಹೂಡುವುದು, ಸರ್ಕಾರದ ಉನ್ನತ ಅಧಿಕಾರಿಗಳನ್ನು ಹಲ್ಲೆಗೀಡುಮಾಡುವುದು, ದೇಶದ್ರೋಹ ಎಸಗುವುದು. ಭಾರತ ಶಾಂತಿಯಿಂದಿರುವ ಪರರಾಷ್ಟ್ರಗಳ ವಿರುದ್ದ ಯುದ್ದ ಹೂಡುವುದು, ಸೈನ್ಯವನ್ನು ದಂಗೆಗೆ ಪ್ರಚೋದಿಸುವುದು. ಸೈನ್ಯಕ್ಕೆ ಸಂಬಂದಪಟ್ಟ ಇತರ ಯಾವುದೇ ಅಪರಾಧ ಎಸಗುವುದು-ಇಂಥ ಅಪರಾಧಿಗಳಿಗೆ ಉನ್ನತ ಶಿಕ್ಷೆಯನ್ನು ವಿಧಿಸಲಾಗಿದೆ (ಅಧ್ಯಾಯ ಗಿI ಮತ್ತು ಗಿII).

	2, ಸಾರ್ವಜನಿಕ ಕ್ಷೇಮ ಮತ್ತು ನೆಮ್ಮದಿಗೆ ಭಂಗ ತರುವ ಅಪರಾಧಗಳು ಸಾರ್ವಜನಿಕ ಶಾಂತಿಗೆ ಅಡ್ಡಿಯೊಡ್ಡುವ ಅಕ್ರಮ ಸಭೆ, ದೊಂಬಿ ಕಾದಾಟ, ಸಾರ್ವಜನಿಕ ಸೇವಕರ ಕುರಿತಾದ ಅಪರಾಧಗಳಾದ ಭ್ರಷ್ಟಾಚಾರ, ಸ್ವೀಕರಿಸುವಿಕೆ, ಕೊಡುವಿಕೆ, ಉದ್ದೇಶವಿಟ್ಟು ಅಧಿಕಾರಿಗಳ ಆಜ್ಞೆಯ ಉಲ್ಲಂಘನೆ ಮತ್ತು ಅಸಹಕಾರ; ಸಾರ್ವಜನಿಕ ನ್ಯಾಯಕ್ಕೆ ತರುವಲ್ಲಿ ಅಪರಾಧಗಳಾದ ಸುಳ್ಳು ಸಾಕ್ಷ್ಯ. ಸುಳ್ಳು ಸಾಕ್ಷ್ಯ ನಿರ್ಮಾಣ, ಇನ್ನೊಬ್ಬ ವ್ಯಕ್ತಿಯಂತೆ ನಟಿಸುವುದು, ನ್ಯಾಯಾಧಿಕರಣದ ದುರುಪಯೋಗ, ಸಾರ್ವಜನಿಕ ಆರೋಗ್ಯ, ಭದ್ರತೆ ಮತ್ತು ನೈತಿಕತೆಗೆ ಅಡ್ಡಿ ತರುವ ಅಪರಾಧಗಳಾದ ಮರಣಾಂತಿಕ ರೋಗಗಳನ್ನು ಹಬ್ಬಿಸುವುದು, ಆಹಾರ ಮತ್ತು ಪಾನೀಯಗಳಲ್ಲಿ ಕಲಬೆರಕೆ, ಸೇವಿಸಲು ಅನರ್ಹವಾದ ಆಹಾರ ಮತ್ತು ಪಾನೀಯಗಳ ಮಾರಾಟ, ಸಾರ್ವಜನಿಕ ಜಲಾಶಯವನ್ನು ಮಲಿನಗೊಳಿಸುವುದು, ಔಷಧಿಗಳಲ್ಲಿ ಕಲಬೆರಕೆ, ಆತುರ ಮತ್ತು ಅಜಾಗರೂಕತೆಯಿಂದ ಹಡಗನ್ನು ಚಾಲಿಸುವುದು, ಬೆಂಕಿ ಮತ್ತು ಸ್ಫೋಟಕ ಸಾಮಗ್ರಿಗಳೊಡನೆ ಅಜಾಗರೂಕತೆಯಿಂದ ವ್ಯವಹರಿಸುವುದು, ಅಶ್ಲೀಲಪುಸ್ತಕ ಮತ್ತು ವಸ್ತುಗಳ ತಯಾರಿಕೆ ಮತ್ತು ಮಾರಾಟ, ಜುಗಾರಿ ಇತ್ಯಾದಿ; ಚುನಾವಣಾ ಅಪರಾಧಗಳು; ನಾಣ್ಯಕರೆನ್ಸಿ ನೋಟು ಮತ್ತು ಸರ್ಕಾರೀ ಸ್ಟಾಂಪುಗಳ ಕಳ್ಳ ತಯಾರಿಕೆ ಮತ್ತಿತರ ಅಪರಾಧಗಳು, ತೂಕ ಮತ್ತು ಅಳತೆಗೆ ಸಂಬಂಧಿ ಪಟ್ಟ ಅಪರಾಧಗಳು; ಧಾರ್ಮಿಕ ಹಕ್ಕನ್ನು ಉಲ್ಲಂಘಿಸುವ ಅಪರಾಧಗಳು; ವೈವಾಹಿಕ ಹಕ್ಕುಗಳನ್ನು ಉಲ್ಲಂಘಿಸುವ ಅಪರಾಧಗಳಾದ ದ್ವಿಪತ್ನಿತ್ವ, ಮೋಸದ ಮದುವೆ ಮತ್ತು ಪರಸ್ತ್ರೀಸಂಗ - ಈ ಅಪರಾಧಗಳು ದಂಡ ಸಂಹಿತೆಯ ಪ್ರಕಾರ ಶಿಕ್ಷಾರ್ಹ.

	ಮನುಷ್ಯ ದೇಹದ ಕುರಿತಾದ ಅಪರಾಧಗಳು: ದೋಷಾಸ್ಪದ ಮಾನವ ಹತ್ಯೆ, ಕೊಲೆ, ಆತ್ಮಹತ್ಯೆಗೆ ಪ್ರೇರಣೆ, ನಿಂದ್ಯ ರೀತಿಯ ಗರ್ಭಪಾತ, ಗರ್ಭದೊಳಗಿನ ಶಿಶುವಿಗೆ ಹಾನಿ, ಸಣ್ಣ ಮಕ್ಕಳನ್ನು ವರ್ಜಿಸುವುದು, ಸಾಮಾನ್ಯ ಮತ್ತು ತೀವ್ರವಾದ ನೋಯಿಸುವಿಕೆ, ಅಕ್ರಮ ತಡೆಯುವಿಕೆ ಮತ್ತು ಅಕ್ರಮ ಬಂಧಿಸುವಿಕೆ, ಹಲ್ಲೆ, ಕದ್ದೊಯ್ಯುವಿಕೆ, ಗುಲಾಮಗಿರಿಗೆ ಗುರಿಮಾಡುವಿಕೆ, ಅಪ್ರಾಯಸ್ಥ ಮಕ್ಕಳನ್ನು ವೇಶ್ಯಾ ಉದ್ಯೋಗಕ್ಕಾಗಿ ಮಾರುವಿಕೆ, ಅಕ್ರಮವಾಗಿ ಕೆಲಸ ಮಾಡಿಸುವಿಕೆ, ಅತ್ಯಾಚಾರ ಮತ್ತು ಅ ನೈಸರ್ಗಿಕ ಅಪರಾಧಗಳನ್ನೆಸಗುವಿಕೆ-ಇವು ಕೂಡ ಶಿಕ್ಷಾರ್ಹ ಅಪರಾಧಗಳು.

	ಆಸ್ತಿ ಅಥವಾ ಸೊತ್ತಿನ ಕುರಿತಾದ ಅಪರಾಧಗಳು: ಕಳ್ಳತನ, ಬಲಾತ್ಕಾರದಿಂದ ಸೊತ್ತನ್ನು ಕಸಿದುಕೊಳ್ಳುವುದು; ದರೋಡೆ, ಡಕಾಯಿತಿ, ಇನ್ನೊಬ್ಬನ ಸೊತ್ತನ್ನು ಅಪ್ರಾಮಾಣಿಕವಾಗಿ ದುರುಪಯೋಗಮಾಡುವುದು; ವಿಶ್ವಾಸ ದ್ರೋಹದಿಂದ ಲಪಟಾಯಿಸುವುದು. ಕಳ್ಳಮಾಲನ್ನು ಸ್ವೀಕರಿಸುವುದು, ಮೋಸ, ಕಪಟ ರೀತಿಯ ಹಕ್ಕು ಪತ್ರಗಳನ್ನು ಮಾಡುವುದು ಮತ್ತು ಆಸ್ತಿ ಪರಬಾರೆ ಮಾಡುವುದು, ತುಂಟತನದಿಂದ ಇನ್ನೊಬ್ಬನ ಸೊತ್ತಿಗೆ ಹಾನಿ ಮಾಡುವುದು, ಅಕ್ರಮ ಪ್ರವೇಶ, ಫೋರ್ಜರಿ ಪತ್ರಗಳ ನಿರ್ಮಾಣ, ದುರುದ್ದೇಶದಿಂದ ಆಸ್ತಿ ಗುರುತುಗಳನ್ನು ಅಳಿಸುವುದು, ಕರೆನ್ಸಿ ನೋಟು ಮತ್ತು ಬ್ಯಾಂಕ್ ನೋಟುಗಳ ಕುರಿತಾದ ಅಪರಾಧಗಳನ್ನು ಮಾಡುವುದು ಶಿಕ್ಷಾರ್ಹ ಅಪರಾಧಗಳಾಗಿವೆ.

	ವ್ಯಕ್ತಿ ಪ್ರತಿಷ್ಠೆಗೆ ಧಕ್ಕೆ ತರುವ ಅಪರಾಧಗಳು; ಅಪಮಾನಕರ ಹೇಳಿಕೆ ಮತ್ತು ಪ್ರಕಟಿಸುವಿಕೆ, ಹಾಗೂ ಬೆದರಿಕೆಗಳು ಕೂಡ ದಂಡನೀಯ ಅಪರಾಧಗಳು.

ಹೀಗೆ ದಂಡಸಂಹಿತೆ ಹೆಚ್ಚಿನ ಮಟ್ಟಿಗೆ ಸಾರ್ವಕಾಲಿಕವೆನಿಸುವಂಥ ಅಪರಾಧಗಳನ್ನು ಗುರುತಿಸಿ ತಕ್ಕುದಾದ ವಿವಿಧ ರೀತಿಯ ಶಿಕ್ಷೆಗಳನ್ನು ವಿಧಿಸಿದೆ. ದಂಡ ಸಂಹಿತೆಯ 125 ವರ್ಷಗಳ ಕಾಲದಲ್ಲಿ ಇದು ಸ್ಪಷ್ಟತೆಗೆ ಹೆಸರಾಗಿದೆ. ಇದಕ್ಕೆ ತಂದ ತಿದ್ದುಪಡಿಗಳು ಕೆಲವೇ ಕೆಲವು ಮತ್ತು ಇವಾದರೂ ತೀವ್ರ ಬದಲಾವಣೆ ತಂದಂಥವಲ್ಲ. ಬದಲಾಗಿ ಇವು ಹೊಸ ಅಪರಾಧಗಳನ್ನು ಮತ್ತು ನಿಯಮಗಳನ್ನು ಸೇರಿದಂಥವು. ಇದು ಭಾರತೀಯ ದಂಡಸಂಹಿತೆಯ ಹೆಚ್ಚುಗಾರಿಕೆ.	
(ಪಿ.ಇ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ